ಡೇಲಿ ಮಿರರ್
 	1903ರಲ್ಲಿ ಲಂಡನಿನಿಂದ ಪ್ರಕಟವಾಗಲಾರಂಭಿಸಿದ ಬೆಳಗಿನ ಪತ್ರಿಕೆ. ಆಲ್ಫ್ರೆಡ್ ಹಾಮ್ರ್ಸ್‍ವರ್ತ್ (ಅನಂತರ ಲಾರ್ಡ್ ನಾರ್ತ್ ಕ್ಲಿಫ್) ಮಹಿಳೆಯರಿಂದಲೇ ಸಂಪಾದಿತವಾಗುವ ಮಹಿಳಾ ಪತ್ರಿಕೆಯಾಗಿ ಇದನ್ನು ಆರಂಭಿಸಿದರು. ಈ ಕ್ಷೇತ್ರದಲ್ಲಿ ಪತ್ರಿಕೆ ಯಶಸ್ವಿಯಾಗಲಿಲ್ಲ. ಆದ್ದರಿಂದ ಇದನ್ನು ಪ್ರಪ್ರಥಮ ಅರ್ಧ-ಪೆನಿ ಸಚಿತ್ರ ಟ್ಯಾಬ್ಲಾಯ್ಡ್ ಆಗಿ ಪರಿವರ್ತಿಸಲಾಯಿತು. ಆದರೂ ಕುಟುಂಬದ ಪತ್ರಿಕೆಯ ಲಕ್ಷಣವನ್ನು ಇದು ಉಳಿಸಿಕೊಂಡಿತು. ಮಹಿಳೆಯರ ಆಸಕ್ತಿಗಳಿಗೆ ವಿಶೇಷ ಗಮನ ನೀಡುತ್ತಿತ್ತು. ಕ್ರಮೇಣ ಪತ್ರಿಕೆಯಲ್ಲಿ ಅನೇಕ ಬದಲಾವಣೆಗಳಾದುವು. ರೇಖಾಚಿತ್ರಗಳಿಗೆ ಬದಲಾಗಿ ಛಾಯಾಚಿತ್ರಗಳು ಪ್ರಕಟವಾಗತೊಡಗಿದುವು. ಪತ್ರಿಕೆಯ ಪ್ರಸಾರವೂ ಏರಿತು. 

	ಲಾರ್ಡ್ ನಾರ್ತ್‍ಕ್ಲಿಫ್ ಸ್ವಲ್ಪಕಾಲದ ಅನಂತರ ಪತ್ರಿಕೆಯನ್ನು ತಮ್ಮ ಸೋದರ ಲಾರ್ಡ್ ರಾದರ್‍ಮಿಯರ್‍ಗೆ ಮಾರಿದರು. 1938ರಲ್ಲಿ ಇವರೂ ಈ ಪತ್ರಿಕೆಯಿಂದ ಬಿಡುಗಡೆ ಹೊಂದಿದರು. ಆ ವೇಳೆಗೆ ಪತ್ರಿಕೆ ಅತ್ಯಧಿಕ ಪ್ರಸಾರ ಹೊಂದಿತ್ತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಡೇಲಿ ಮಿರರ್ ಪತ್ರಿಕೆಯನ್ನು ದಮನ ಮಾಡುವುದಾಗಿ ಬ್ರಿಟನಿನ ಗೃಹಕಾರ್ಯದರ್ಶಿ ಹರ್ಬಟ್ ಮಾರಿಸನ್ ಬೆದರಿಸಿದರು. ಯುದ್ಧಕಾರ್ಯಕ್ಕೆ ಅಡ್ಡಿಯಾಗುವಂಥ ವಿಷಯಗಳನ್ನು ಡೇಲಿ ಮಿರರ್ ಪ್ರಕಟಿಸುತ್ತಿದೆ ಎಂಬುದು ಅವರ ಆಪಾದನೆ. ಈ ಬಗ್ಗೆ ಬ್ರಿಟಿಷ್ ಪತ್ರಿಕೆಗಳಲ್ಲಿ ಎರಡು ಬಣಗಳಾದುವು. ಕೆಲವು ಪತ್ರಿಕೆಗಳು ನಿರ್ಬಂಧವನ್ನು ಸ್ವಾಗತಿಸಿದರೆ ಮತ್ತೆ ಕೆಲವು ಇದನ್ನು ವಿರೋಧಿಸಿದುವು. 

	ಡೇಲಿ ಮಿರರ್, ಮಿರರ್ ಗ್ರೂಪ್ ಲಿಮಿಟೆಡ್ ಸಂಸ್ಥೆಯ ಒಡೆತನದಲ್ಲಿದೆ. ಸಂಡೆ ಮಿರರ್, ಸಂಡೆ ಪೀಪಲ್ ಮತ್ತು ಸ್ಪೋರ್ಟಿಂಗ್ ಲೈಫ್ ಇದರ ಸಹ ಪ್ರಕಟಣೆಗಳು. ಸ್ವತಂತ್ರ ವಾಮಪತ್ರಿಕೆಯೆನಿಸಿರುವ ಇದರ ಪ್ರಸಾರ 42.89,233 (ಜನವರಿ-ಜೂನ್ 1972). 
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ